2nd pu
ಜುಲೈ ೨೦೧೫
ಪೂರಕ ಪರೀಕ್ಷೆ
1. ಒಂದುವಾಕ್ಯದಲ್ಲಿ ಉತ್ತರಿಸಿ
: 10X1=10
1. ಯಾರ ಕೈಲಿ ದರ್ಪಣವಿದ್ದು ಫಲವಿಲ್ಲ?
ಅಂಧಕನ(ಕುರುಡ) ಕೈಲಿ ದರ್ಪಣವಿದ್ದು ಫಲವಿಲ್ಲ.
2. ದ್ರೌಪದಿ ಮುಂದಲೆ ಹಿಡಿದವರು ಯಾರು?
ದ್ರೌಪದಿ ಮುಂದಲೆ ಹಿಡಿದವನು ಕೀಚಕ.
3. ಕುಳಿತು ಕೆಮ್ಮುವ ಪ್ರಾಣಿ ಯಾವುದು?
ರಜಾ ದಿನಗಳಲ್ಲಿ ಕುಳಿತು ಕೆಮ್ಮುವ ಪ್ರಾಣಿ – ತಂದೆ ಎಂದು ಜಿ.ಎಸ್.
ಶಿವರುದ್ರಪ್ಪನವರು ತಮ್ಮ ಕವಿತೆ ಮುಂಬೈಜಾತಕದಲ್ಲಿ ಹೇಳಿದ್ದಾರೆ.
4. ಕವಯಿತ್ರಿ ಯಾವುದಕ್ಕೆ ಧಿಕ್ಕಾರವಿರಲಿ ಎನ್ನುತ್ತಾರೆ?
ಒಮ್ಮೆ ನಗುತ್ತೇವೆ ಎಂಬ ಕವನದಲ್ಲಿ ಕವಯಿತ್ರಿ ದೀನ ದಲಿತತನಕ್ಕೆ ಧಿಕ್ಕಾರವಿರಲಿ ಎಂದು
ಹೇಳಿದ್ದಾರೆ.
5. ವಾಲ್ ಪರೈಗೆ ಬಂದ ಬ್ರಿಟೀಷ್ ಪ್ರಜೆ ಯಾರು?
ಕಾರ್ವೇರ್ ಮಾರ್ಶ್ ವಾಲ್ ಪರೈಗೆ ಬಂದ ಬ್ರಿಟೀಷ್ ಪ್ರಜೆ.
6. ಕನ್ನಡದ ಮೂಲಕ ಕಲಿತು ಶ್ರೇಷ್ಠ
ವಿಜ್ಞಾನಿಯಾದವರು ಯಾರು?
ಡಾ|| ಸಿ.ಎನ್.ಆರ್. ರಾವ್ ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದವರು
7. ಯಾವ ಕತೆ ಹೇಳಬೇಕೆಂದು ಮನೋರಮೆ ಕೇಳಿದಳು?
ಶ್ರೀರಾಮ ಅಶ್ವಮೇಧ ಮಾಡಿದ ಕಥೆಯನ್ನು ಹೇಳಬೇಕೆಂದು ಮನೋರಮೆ ಕೇಳಿದಳು.
8. ದುರ್ಗಪ್ಪ ಏನನ್ನು ಕೇಳಿ ಪಡೆಯಲು ಬಂದಿದ್ದನು?
ದುರ್ಗಪ್ಪ ಕೊಡಲಿಯನ್ನು ಕೇಳಿ ಪಡೆಯಲು ಬಂದಿದ್ದನು.
9. ಮುನ್ಸಿಪಾಲಿಟಿ ಪ್ರೆಸಿಡೆಂಟರ ಹೆಸರೇನು?
ಖಾನ್ ಸಾಹೇಬ ಎಂಬುದು ಮುನ್ಸಿಪಾಲಿಟಿ ಪ್ರೆಸಿಡೆಂಟರ ಹೆಸರು.
10.ಆನೆ ಕಣ್ಮರೆಯಾದ ವಿಚಾರವನ್ನು ನಾಗರಾಜನಿಗೆ ಹೇಳಿದವರು ಯಾರು?
ಆನೆ ಕಣ್ಮರೆಯಾದ ವಿಚಾರವನ್ನು ನಾಗರಾಜನಿಗೆ ಹೇಳಿದ್ದು ಗಾರ್ಡ್ ರಾಮಪ್ಪ.
ಆ – ವಿಭಾಗ
1. ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X4=8
11. ಗುರುವಿನ ಲಕ್ಷಣಗಳೇನು?
ಗುರುವು ಲಘುವರ್ತನೆಯನ್ನು ತೋರುವುದಿಲ್ಲ ಲಘುವಾಗಿ ವರ್ತಿಸುವುದು ಆಚಾರಕ್ಕೆ
ವಿರುದ್ಧವಾದುದು. ಅಲ್ಲದೆ ಯಾರು ಗುರು, ಲಿಂಗ, ಜಂಗಮವನ್ನುಲಘುವಾಗಿಕಾಣುವನೋ ಅವನು ಲಘುವಾಗಿಯೇ
ತೋರುವನು.
12. ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು?
ಲೆಕ್ಕವಿಲ್ಲದಷ್ಟು ಧನವಿದ್ದರೇನು? ಹಸಿದ ಹೊಟ್ಟೆಗೆ ಆಹಾರ ದೊರಕಿಸುವಷ್ಟು ಇದ್ದರೆ
ಸಾಕು. ತಾನೂ ಊಟಮಾಡದೆ , ಇತರರಿಗೂ ನೀಡದ ಹಣ ವ್ಯರ್ಥ. ಅಂತೆಯೇ ಮುಪ್ಪಿನಲ್ಲಿರುವ ತಂದೆ
ತಾಯಿಗಳನ್ನು ನೋಡಿಕೊಳ್ಳದ ಮಗ ವ್ಯರ್ಥ. ಕಾಯಿಲೆ ಯಿಂದ ನರಳುತ್ತಿರುವಾಗ ಬಂದು ನೋಡದ ಬಂಧುವರ್ಗ
ವ್ಯರ್ಥ, ಸಮಯಕ್ಕೆ ದೊರೆತ ಹುಲ್ಲುಕಡ್ಡಿಯಷ್ಟು ಸಹಾಯವೂ ಪರ್ವತದಷ್ಟು ಮಹತ್ವದ್ದಾಗುತ್ತದೆ.
13. ಹಡೆದವ್ವನನ್ನು ಯಾವಾಗ ನೆನೆಯಬೇಕು?
ಹಡೆದವ್ವನನ್ನು ಊರೆಲ್ಲ ಉಂಡುಮಲಗಿದಾಗ , ಬೆಳ್ಳಿಚುಕ್ಕಿ ಮೂಡಿದಾಗ ನೆನೆಯಬೇಕು.
14. ಮುದುಕ ಏನೆಂದು ಗೋಗರೆಯುತ್ತಾನೆ?
ದೊಡ್ಡಮಗನ ಬಳಿ ಇರುವ ಮುದುಕಿ
ಇರುವುದು ಕನ್ನಡ ನಾಡಿನಲ್ಲಿ. ಅಕ್ಕಪಕ್ಕದವರೊಡನೆ ತಾನಾದರೋ ಮಾತನಾಡುತ್ತಾ ಇರಬಹುದು. ಚಿಕ್ಕಮಗ
ಮತ್ತು ಸೊಸೆ ಇರುವುದು ಅಸ್ಸಾಂ ನಲ್ಲಿ ಅವರ ಬಳಿ ಇರುವ ಮುದುಕನಿಗೆ ಮಾತನಾಡಲು ಯಾರೂ ಜೊತೆಯಿಲ್ಲ
ಇತರರೊಂದಿಗೆ ಮಾತನಾಡಲು ಆ ಪ್ರದೇಶದ ಭಾಷೆಯ ತಿಳುವಳಿಕೆ ಇಲ್ಲ. ಕರೆ ಮಾಡಿದಾಗಲೆಲ್ಲ ಮಾತೇ ಮರೆತು
ಹೋಗಿದೆ ಕಣೆ , ಇನ್ನೂ ಸ್ವಲ್ಪ ಹೊತ್ತು ಮಾತಾಡು ಎಂದುಕೇಳಿಕೊಳ್ಳುತ್ತಾನೆ.
15. ಎಣ್ಣೆತೀರಿದ ದೀಪಗಳು ಏನನ್ನು ಸೂಚಿಸುತ್ತವೆ?
ಎಣ್ಣೆ ತೀರಿದ ದೀಪಗಳು ಅಂತ್ಯ, ಸಾವು ಸೂಚಿಸುತ್ತವೆ. ಇದನ್ನೇ ಕವಿ ಆತ್ಮಕ್ಕೆ ಕಮಟು
ಹತ್ತಿದಾಗಲೇ ಎಣ್ಣೆ ತೀರಿದ್ದು ತಿಳಿಯುತ್ತದೆ. ಎಂದಿದ್ದಾರೆ.
2. ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X3=6
16. ಕಣ್ಣನ್ನು ಪರೀಕ್ಷಿಸಿದ ಡಾ||ತಿಮ್ಮಪ್ಪ ಬಸಲಿಂಗನಿಗೆ ಏನೆಂದು ಹೇಳಿದರು?
ಡಾ. ತಿಮ್ಮಪ್ಪ ಕಣ್ಣುನೋವಿನಿಂದ ಬಳಲುತ್ತಿದ್ದ ಬಸಲಿಂಗನನ್ನು ಪರೀಕ್ಷಿಸಿ ನೋವಿನ
ಕಾರಣವನ್ನು ಹುಡುಕಿದರು. ನಿನ್ನ ಕಣ್ಣು ಸರಿಯಾಗುತ್ತೇ ಆದರೆ ಆಪರೇಷನ್ ಆಗಬೇಕು ಪರವಾಗಿಲ್ಲವಾ?
ಎಂದು ವಿಶ್ವಾಸ ತುಂಬಿದ ಮಾತುಗಳಿಂದ ಅವನಿಗೆ ಧೈರ್ಯ ಹೇಳಿದರು.
17. ಕರ್ನಾಟಕದಲ್ಲಿ ಕನ್ನಡಕ್ಕೆ ಯಾವ
ಸ್ಥಾನವಿರಬೇಕೆಂದು ಹಾಮಾನಾ ಅಪೇಕ್ಷಿಸಿದ್ದಾರೆ?
ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ , ಕನ್ನಡವೇ ಪ್ರಧಾನ , ರಾಜ , ರಾಣಿ, ರಾಜಕುಮಾರ ಎಲ್ಲವೂ ಆಗಿರಬೇಕು. ಮಿಕ್ಕ ಯಾವ ಭಾಷೆಯಾದರೂ ಇಲ್ಲಿ ಸೇವಕ ಸ್ಥಾನದಲ್ಲಿ ಇರಬೇಕು. ಎಂದು ಹಾ.ಮಾ.ನಾಯಕರು ಅಪೇಕ್ಷಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ , ಕನ್ನಡವೇ ಪ್ರಧಾನ , ರಾಜ , ರಾಣಿ, ರಾಜಕುಮಾರ ಎಲ್ಲವೂ ಆಗಿರಬೇಕು. ಮಿಕ್ಕ ಯಾವ ಭಾಷೆಯಾದರೂ ಇಲ್ಲಿ ಸೇವಕ ಸ್ಥಾನದಲ್ಲಿ ಇರಬೇಕು. ಎಂದು ಹಾ.ಮಾ.ನಾಯಕರು ಅಪೇಕ್ಷಿಸಿದ್ದಾರೆ.
18. ಮಳೆಗಾಲದಲ್ಲಿ ಹೊಳೆ ಹೇಗೆ
ಕಿರಿಕಿರಿ ಎಬ್ಬಿಸುತ್ತದೆ?
ಮಳೆಗಾಲ
ಬಂದೀತೆಂದರೆ ಹೊಳೆ ತನ್ನ ಪಾತ್ರವನ್ನು ವಿಸ್ತರಿಸುತ್ತಾ, ವೆಂಕಪ್ಪಯ್ಯನ ತೆಂಗಿನ ತೋಟಕ್ಕೆ
ನುಗ್ಗಿ ಇಡೀ ತೋಟವನ್ನು ಕಡಲುಮಾಡಿ ಕಿರಿಕಿರಿಯನ್ನು ಉಂಟುಮಾಡುತ್ತಿತ್ತು.
19. ಹಳ್ಳಿಯ ಚಹಾ ಅಂಗಡಿಯೆಂದರೆ
ಹೇಗಿರುತ್ತದೆ?
ಹಳ್ಳಿಯ
ಚಹಾ ಫಳಾರದ ಅಂಗಡಿಗಳು ಮುರುಕು ಚಪ್ಪರ , ಮುರುಕು ಬೇಂಚು ಮೂರುಕಾಲಿನ ಕುರ್ಚಿಹೊಂದಿದ್ದು,
ಇಲ್ಲಿನ ಆತ್ಮೀಯತೆ ಬೇರೆಲ್ಲೂ ಕಾಣಸಿಗದು. ಮಾಣಿ ತಂದುಕೊಟ್ಟ ಕಾಫಿ ಹೀರುತ್ತಲೋ, ತಿಂಡಿ
ತಿನ್ನುತ್ತಲೋ, ಇಲ್ಲವೆ ಇಂಜಿನ್ ಹೊಗೆಯಂತೆ ಬೀಡಿಯ ಹೊಗೆಬಿಡುತ್ತಾ ಕೆಮ್ಮುತ್ತ ತಾಸುಗಟ್ಟಲೆ
ಕುಳಿತು ಮಾತನಾಡುತ್ತ ಊರಸುದ್ದಿಯನ್ನು ಮಾತನಾಡುತ್ತಾ , ಎದುರು ಕುಳಿತವರನ್ನು ಹಾಸ್ಯಮಾಡುತ್ತ
ಕಾಲಕಳೆಯುತ್ತಾ ಊರಿನ ಸುದ್ದಿಯೊಂದಿಗೆ ದೇಶದ ಸುದ್ಧಿಯನ್ನು ಚರ್ಚಿಸುತ್ತಾ ಹೊತ್ತು ಕಳೆಯಬಹುದು.
3. ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X3=6
20. ಆನೆ ಸಾಕುವುದರ ಬಗ್ಗೆ ಜನರ ನಂಬಿಕೆ ಏನಾಗಿತ್ತು?
ಕೃಷ್ಣೇಗೌಡ ಆನೆತರುವ ಸುದ್ಧಿಕೇಳಿದ ಜನ ತಮ್ಮೊಳಗೇ ಮಾತನಾಡಿಕೊಂಡರು. ಆನೆಸಾಕುವುದು ಎಂದರೆ ಎಲೆಕ್ಷನ್ ಗೆ
ನಿಂತಹಾಗೆ, ಮನೆ ಮಠ ಕಳೆದುಕೊಂಡು ಹೆಂಡತಿಮಕ್ಕಳ ಬಾಯಿಗೆ ಮಣ್ಣುಹಾಕಿದಂತೆ ಎಂದೇ ತಿಳಿದಿದ್ದ ಜನರ
ನಂಬಿಕೆ ಸುಳ್ಳಾಗುವಂತೆ ಕೃಷ್ಣೇಗೌಡ ಆನೆ ಸಾಕಿದನು.
21. ನಾಗರಾಜ ದುರ್ಗಪ್ಪನ ಮೇಲೆ ಏನೆಂದು ರೇಗಿದನು?
ದುರ್ಗಪ್ಪ ತಾನು ಮರ ಕಡಿದಿಲ್ಲವೆಂದು ಕೃಷ್ಣೇಗೌಡರ ಆನೆಯೇ ಕೊಂಬೆಯನ್ನು ಮುರಿದು
ಬೀಳಿಸಿದೆ ಎಂದೂ ಹೇಳಿದ್ದಕ್ಕೆ ಫಾರೆಸ್ಟರ್ ನಾಗರಾಜನು “ ಹಾಗಂತ ಬರೆದುಕೊಡ್ತೀಯಾ? ಹಾಗಿದ್ರೆ
ಹೇಳು ಅದನ್ನೂ ಎಳದುಕೊಂಡು ಬಂದು ಅಂಬಾಡಿಸರ್ ಕಾರಿನ ಜೊತೆ ಕಟ್ಟಾಕಿ ಬರೆ ಹಾಕಿಬಿಡ್ತೀನಿ. ನಿನ್ನ
ಪುಕಾರು ಏನಿದ್ದರೂ ಬರವಣಿಗೆಯಲ್ಲಿ ಇರಬೇಕು. ಹಾಗಿದ್ರೆ ಮಾತ್ರ ಆಕ್ಷನ್ ತೆಗೆದುಕೊಳ್ಳುವುದು
ಎಂದು ರೇಗಿದನು.
22.ಹುಚ್ಚುನಾಯಿಗಳು ಆಸ್ಪತ್ರೆಯಲ್ಲಿ ಹೇಗೆ ವರ್ತಿಸುತ್ತವೆ ಎಂದು ಪುಟ್ಟಯ್ಯ ಹೇಳಿದನು?
ಹುಚ್ಚುನಾಯಿಗಳ ಬಳಿ ಧೈರ್ಯದ ಪ್ರಶ್ನೆಯೇ ಇಲ್ಲ, ಅವಕ್ಕೆ ತಲೆಕೆಟ್ಟು
ಕಂಡಕಂಡದ್ದನ್ನೆಲ್ಲಾ ಕಚ್ಚುತ್ತವೆ, ಆಸ್ಪತ್ರೆಗೆ ಬಂದಾಗ ಅಲ್ಲಿನ ಮೇಜು , ಕುರ್ಚಿಗಳ
ಕಾಲಿಗೆಲ್ಲಾ ಕಚ್ಚುತ್ತವೆ, ಆನೆಚರ್ಮಕ್ಕೆ ಅದರ ಹಲ್ಲು ನಾಟುವುದಿಲ್ಲ ಆದರೆ ಆನೆಯ ಮೈ ಮೇಲೆ ಒಂದು
ಸಣ್ಣ ಗೀರು ಗಾಯ ಇದ್ದರೂ ಸಾಕು ಹುಚ್ಚುನಾಯಿ ಜೊಲ್ಲು ತಾಗಿದರೆ ಇವತ್ತಲ್ಲಾ ಒಂದು ವರ್ಷಕ್ಕಾದರೂ
ಹುಚ್ಚು ಬಂದೇ ಬರುತ್ತದೆ ಎಂದು ಪುಟ್ಟಯ್ಯ ಹೇಳುತ್ತಾನೆ.
23. ಅರಣ್ಯ ಇಲಾಖೆಯವರು ನಾಗರಾಜನನ್ನು ಕುರಿತು ಏನೆಂದು ಜಾಹೀರಾತು ನೀಡಿದರು?
ಫಾರೆಸ್ಟ್ ಡಿಪಾರ್ಟ್ ಮೆಂಟಿನವರು
ಪತ್ರಿಕೆಗಳಲ್ಲಿ ನಾಗರಾಜನ ಫೋಟೋ
ಹಾಕಿಸಿ, ಮನೆಯವರು ಮೇಲಾಧಿಕಾರಿಗಳು ಹಾಗೂ ಊರಿನ ಜನರೆಲ್ಲಾ ನಿನ್ನದೇ
ನಿರೀಕ್ಷೆಯಲ್ಲಿದ್ದಾರೆಂದೂ, ನಿನ್ನ ವಿರುದ್ಧ ಯಾವುದೇ ಕ್ರಮ ಅಥವಾ ಷೋಕಾಸ್ ನೋಟೀಸ್ ಇಲ್ಲವೇ
ತನಿಖೆ ನಡೆಸುವುದಿಲ್ಲವೆಂದು , ಈ ಮನವಿ ನೋಡಿದ ಕೂಡಲೇ ಎಲ್ಲಿದ್ದರೂ ಹಿಂದಿರುಗಿ ಬರತಕ್ಕದ್ದೆಂದೂ
ಜಾಹಿರಾತು ಕೊಟ್ಟಿದ್ದರು.
ಇ- ವಿಭಾಗ
1. ಎರಡನ್ನು ಕುರಿತು ಸಂದರ್ಭ ಸೂಚಿಸಿ ವಿವರಿಸಿ. 2X3=6
24. ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ಪ್ರಸ್ತುತ ವಾಕ್ಯವನ್ನು ಪುರಂದರ ದಾಸರ ಜಾಲಿಯಮರದಂತೆ ಕೀರ್ತನೆಯಿಂದ ಆರಿಸಲಾಗಿದೆ.
ದುರ್ಜನರನ್ನು ಜಾಲಿಯಮರಕ್ಕೆ ಹೋಲಿಸುತ್ತಾ ಈ ಕೀರ್ತನೆಯನ್ನು ರಚಿಸಿದ್ದಾರೆ.
ಜಾಲಿಯಮರದಂತೆ ಎಲ್ಲೆಡೆ ಆವರಿಸಿರುವ ದುರ್ಜನರು ಯಾರ ಸ್ನೇಹವನ್ನೂ ಸಂಪಾದಿಸದೆ, ಮೋಸ,
ವಂಚನೆ, ಕಪಟತನ , ಅನೀತಿ ಅನಾಚಾರಗೈಯ್ಯುತ್ತಾ ಸದಾ ಕೆಟ್ಟದ್ದನ್ನೇ ಚಿಂತಿಸುತ್ತಾ ಇರುತ್ತಾರೆ
ಅಂತೆಯೇ ಜಾಲಿಮರವು ಬುಡದಿಂದ ತುದಿಯವರೆಗೆ ಮುಳ್ಳನ್ನು ಹೊಂದಿದ್ದು ನೆರಳನ್ನು ನೀಡುವುದೂ ಇಲ್ಲ,
ಪರಿಮಳದ ಹೂವನ್ನೂ ಹೊಂದಿರುವುದಿಲ್ಲ. ರುಚಿಕರವಾದ ಹಣ್ಣನ್ನೂ ಕೊಡುವುದಿಲ್ಲ. ನೆರಳಲ್ಲಿ ಕೂಡಲು ಬಂದವರಿಗೆ ಸ್ಥಳವೂ ಇಲ್ಲವಾಗಿರುವಂತೆ
ದುರ್ಜನರು ಆಸರೆಯನ್ನೂ ನೀಡರು.
25. ರಸ್ತೆಯಂಚಿನಲ್ಲೇ ಕೈ ಹಿಡಿದು ನಡೆಸಿದವಳು
ಪ್ರಸ್ತುತ ವಾಕ್ಯವನ್ನು ಜಿ.ಎಸ್. ಶಿವರುದ್ರಪ್ಪನವರ ಮುಂಬೈಜಾತಕ ಎಂಬ ಕವಿತೆಯಿಂದ
ಆರಿಸಿಕೊಳ್ಳಲಾಗಿದೆ. ನಗರದ ಯಾಂತ್ರಿಕಜೀವನವನ್ನು
ಈ ಕವಿತೆಯಲ್ಲಿ ವ್ಯಕ್ತಪಡಿಸಿದ್ದಾರೆ.
ನಗರದ ತಾಯಿಯೊಬ್ಬಳು ತನ್ನ ಮಗುವಿಗೆ ನಗರ ಜೀವನದ ಪರಿಚಯಮಾಡಿಕೊಡುವ ಬಗ್ಗೆ ಈ ಮಾತು
ಹೇಳಿದ್ದಾರೆ. ಸಾವಿರಾರು ವಾಹನಗಳು ಚಲಿಸುವ ರಸ್ತೆಯ ಅಂಚಿನಲ್ಲಿ ಎಚ್ಚರಿಕೆಯಿಂದ ಮಗುವಿನ
ಕೈಹಿಡಿದು ನಡೆಸುತ್ತಾಳೆ, ಚಿಕ್ಕ ಕೋಣೆಯಲ್ಲಿಯೇ ಹೊರಲೋಕವನ್ನು ಪರಿಚಯಿಸುತ್ತಾಳೆ.
26.ನಿದ್ದೆ ತಿಳಿದೆದ್ದ ಮಗು ಅತ್ತದ್ದು ಹಾಲಿಗೋ ಅಮ್ಮನಿಗೋ
ಈ ವಾಕ್ಯವನ್ನು ಪ್ರೊ. ಟಿ. ಎಲ್ಲಪ್ಪನವರು ಬರೆದಿರುವ ಹತ್ತಿ...ಚಿತ್ತ...ಮತ್ತು...
ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ.
ನಿದ್ದೆಯಿಂದ ಎದ್ದ ಮಗುವಿನ ಅಳು ಅಗತ್ಯದ ಸುಳಿವನ್ನು ನೀಡುತ್ತದೆ ಎಂದುಕೊಂಡು ನಾವು
ಮಗು ಹಸಿವಿನಿಂದ ಅಮ್ಮನಿಗಾಗಿಯೋ, ಹಾಲಿಗಾಗಿಯೋ ಅಳುತ್ತಿದೆ ಎಂದು ಯೋಚಿಸುತ್ತೇವೆ. ಅಮ್ಮ ಸಿಕ್ಕರೆ ಹಾಲು ಸಿಗುತ್ತದೆ ಅಲ್ಲವೇ? ಎಂಬ
ಪ್ರಶ್ನೆ ಎದುರಾಗುವುದು ಸಹಜ. ಆದರೆ ಎಷ್ಟುಜನ ತಾಯಂದಿರು ಎದೆ ಹಾಲು ಕುಡಿಸಿ ಬೆಳೆಸುತ್ತಾರೆ.
ಎಷ್ಟೋ ಮಕ್ಕಳಿಗೆ ಅಮ್ಮನಿದ್ದೂ ಬಾಟಲಿಹಾಲಿಗೆ ಬಾಯೊಡ್ಡುವ
ಅನಾಥ ಸ್ಥಿತಿಯೂ ಇದೆ. ಎಂಬುದನ್ನು ಇಲ್ಲಿ ಹೇಳಿದ್ದಾರೆ.
( ಮಗುವಂತಿರುವ ಭಕ್ತ ಅಳುತ್ತಿರುವುದು ತಾಯಿಸ್ವರೂಪದಲ್ಲಿರುವ ಭಗವಂತನಿಗೋ ಅಥವಾ
ಪ್ರಾಪಂಚಿಕ ಲಾಭಕ್ಕೋ ಎಂಬುದು ಒಳ ಅರ್ಥವಾಗಿದೆ. )
2. ಒಂದನ್ನು ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
27. ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲೇ ಬಂದವು
ಕೃಪಾಕರ, ಸೇನಾನಿ ಮತ್ತು ಕೆ. ಪುಟ್ಟಸ್ವಾಮಿ ಯವರು ಬರೆದಿರುವ ವಾಲ್ ಪರೈ
ಅಭಿವೃದ್ಧಿತಂದ ದುರಂತ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಲೇಖಕರು ವಾಲ್ಪರೈ ಕಾಡಿನಲ್ಲಿ ಕಾರ್ವೇರ್ ಮಾರ್ಷ್ ತಂದು ನೆಟ್ಟ ಚಹಾ
ಗಿಡದಿಂದಲ್ಲೇ ಕಾಡಿನ ದುರಂತ ಆರಂಭಗೊಂಡಿತು ಎಂಬುದನ್ನು ಈ ಮಾತಿನಲ್ಲಿ ಹೇಳುತ್ತಿದ್ದಾರೆ.
ದಟ್ಟವಾದ ಕಾಡಿನಲ್ಲಿ ತನ್ನಕುದುರೆಯೊಂದಿಗೆ ದಾರಿತಪ್ಪಿ ಹೊರಬರಲು ತಿಳಿಯದೆ
ಕಂಗಾಲಾಗಿದ್ದ ಕಾರ್ವೆರ್ ಮಾಷ್ ಗೆ ಆದಿವಾಸಿಯಾದ ಪೂಣಾಚ್ಚಿ ಸಿಗುತ್ತಾನೆ. ಅವನ ಸಹಕಾರದಿಂದ ಇಡೀ
ಕಾಡಿನ ನಕ್ಷೆ ತಯಾರಿಸಿ ಆಗಷ್ಟೇ ಭಾರತಕ್ಕೆ ಪ್ರವೇಶಿಸುತ್ತಿದ್ದ ಚಹಾ ಗಿಡಗಳನ್ನು ತಂದು
ನೆಡುತ್ತಾನೆ ಕಾಡಿನ ಫಲವತ್ತತೆಯಿಂದ ಚೆನ್ನಾಗಿ ಬೆಳೆದದ್ದರಿಂದ ಸ್ವಲ್ಪಸ್ವಲ್ಪವಾಗಿ ಕಾಡನ್ನು
ಕತ್ತರಿಸುತ್ತಾ ಟೀ ಗಿಡಗಳ ನೆಡುತ್ತಾ ತೋಟದ ವಿಸ್ತರಣೆ ಮಾಡುತ್ತಾ ಇಡೀ ಕಾಡನ್ನು ಚಹಾತೋಟ
ಆವರಿಸಿದ್ದು, ಕಾಡಿನ ಸರ್ವನಾಶದ ಮೂಲವಾಯಿತು ಎಂದಿದ್ದಾರೆ.
28.ಮಗುವೇ ಮೊದಲ ವಿಜ್ಞಾನಿ
ಈ ಮಾತನ್ನು ಎಚ್.ಆರ್. ರಾಮಕೃಷ್ಣರಾವ್ ಬರೆದಿರುವ ಬದುಕನ್ನು ಪ್ರೀತಿಸಿದ ಸಂತ ಎಂಬ
ಲೇಖನದಿಂದ ಆರಿಸಲಾಗಿದೆ. ಅಬ್ದುಲ್ ಕಲಾಂ ಮಕ್ಕಳ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾತನ್ನು
ಹೇಳಿದರು.
ಚನ್ನೈ ನ ಪದ್ಮಶೇಷಾದ್ರಿ ಬಾಲಭವನದ ಪ್ರೌಢಶಾಲೆಯಲ್ಲಿ ಕ್ವಿಜ್ ಕಾರ್ಯಕ್ರಮದಲ್ಲಿ
ಮಕ್ಕಳೊಂದಿಗೆ ಮಾತನಾಡುವಾಗ ಒಬ್ಬ ವಿದ್ಯಾರ್ಥಿ ಕಲಾಂ ರನ್ನು ಕುರಿತು ಭೂಮಿಯ ಮೇಲಿನ ಮೊದಲ
ವಿಜ್ಞಾನಿ ಯಾರಾಗಿರಬಹುದು ಎಂದು ಪ್ರಶ್ನಿಸಿದಾಗ ಈ ಮೇಲಿನಂತೆ ಕಲಾಮರು ಈ ಮೇಲಿನಂತೆ ಹೇಳಿದರು . ಇವರ ಮಾತನ್ನು ನೆರೆದಿದ್ದ
ಪ್ರೇಕ್ಷಕರು , ಮಕ್ಕಳು ಎಲ್ಲರೂ ಮೆಚ್ಚಿದರು.
3. ಒಂದನ್ನು ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
29. ಆನೆಸಾಕುವುದೆಂದರೆ ಎಲೆಕ್ಷನ್ ಗೆ ನಿಂತ ಹಾಗೆ
ಈ ಮಾತನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೃಷ್ಣೇಗೌಡನ ಆನೆ ಎಂಬ ದೀರ್ಘಕತೆಯಿಂದ
ಆರಿಸಲಾಗಿದೆ. ಕೃಷ್ಣೇಗೌಡ ಆನೆತರುವ
ಸುದ್ಧಿಕೇಳಿದ ಜನ ತಮ್ಮೊಳಗೇ ಮಾತನಾಡಿಕೊಂಡರು.
ಆನೆಸಾಕುವುದು ಎಂದರೆ ಎಲೆಕ್ಷನ್ ಗೆ ನಿಂತಹಾಗೆ, ಮನೆ ಮಠ ಕಳೆದುಕೊಂಡು ಹೆಂಡತಿಮಕ್ಕಳ ಬಾಯಿಗೆ
ಮಣ್ಣುಹಾಕಿದಂತೆ ಎಂದೇ ತಿಳಿದಿದ್ದ ಜನರ ನಂಬಿಕೆ ಸುಳ್ಳಾಗುವಂತೆ ಕೃಷ್ಣೇಗೌಡ ಆನೆ ಸಾಕಿದನು. ಯಾವುದಾದರೂ ಕಾರ್ಯ ಮಾಡಲು ಹೊರಟಾಗ ಜನ ಏನೆಲ್ಲಾ
ಮಾತನಾಡಬಹುದು ಎಂಬುದು ಈ ಮಾತಿನಲ್ಲಿ ವ್ಯಕ್ತವಾಗುತ್ತದೆ.
30. ಇತ್ತ ಮುಖ ಹಾಕಲಿ, ಅದನ್ನು ಕೋವೀಲೇ ಹೊಡಿತೀನಿ.
ಈ ಮಾತನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೃಷ್ಣೇಗೌಡನ ಆನೆ ಎಂಬ ದೀರ್ಘಕತೆಯಿಂದ
ಆರಿಸಲಾಗಿದೆ.
ಹಳೆಕೊಪ್ಪದ ಸುಬ್ಬಣ್ಣನ ಕೊಟ್ಟಿಗೆಯ ಬಳಿ ನಾಯಿಗಳು ಬೊಗಳುತ್ತಿದ್ದು ಏನಾಗುತ್ತಿದೆ
ಎಂದು ನೋಡಲು ಮನೆಯಿಂದ ಹೊರಬಂದ ಸುಬ್ಬಣ್ಣನ ಕಣ್ಣೆದುರಿಗೇ ಕೊಟ್ಟಿಗೆ ಕಂಬಗಳು ಲಟಲಟನೆ ಮುರಿದು
ಬಿದ್ದು ಕತ್ತಲಲ್ಲಿ ಯಾವುದೋ ಪ್ರಾಣಿ ಹೋಗಿದ್ದು ನಾಯಿಗಳು ಅದರ ಹಿಂದೆಯೇ ಹೋಗಿದ್ದೂ ,
ಕೊಟ್ಟಿಗೆಯ ಮಾಡು ಕುಸಿದು ಕೊಟ್ಟಿಗೆಯಲ್ಲಿದ್ದ ಕೆಲವು ಮೇಕೆಗಳು ಸತ್ತುಹೋಗಿದ್ದು , ಇದಕ್ಕೆಲ್ಲಾ
ಆನೆಯಂಥ ಪ್ರಾಣಿಯೇ ಕಾರಣ , ಮೇಕೆಯ ಮೇವನ್ನು ಕದಿಯಬೇಕಾದರೆ ಅದು ಕೃಷ್ಣೇಗೌಡರ ಆನೆಯೇ ಆಗಿರಬೇಕು
ಎಂದು ಭಾವಿಸಿ , ಆನೆಯನ್ನು ಕೃಷ್ಣೇಗೌಡರನ್ನು ಬಗೆಬಗೆಯಾಗಿ ನಿಂದಿಸುತ್ತಾ ಆ ಆನೆ ಇತ್ತ ಮುಖ
ಹಾಕಲಿ ಅದನ್ನು ಕೋವಿಯಿಂದ ಹೊಡೀತೀನಿ ಎಂದು ಸುತ್ತಮುತ್ತ ನಿಂತಿದ್ದ ನಿಂತು ಅನುಕಂಪ
ಸೂಚಿಸುತ್ತಿದ್ದ ಜನರ ಮುಂದೆ ಕೂಗಾಡಿದನು.
ಈ – ವಿಭಾಗ
1. ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X3=12
31. ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿ.
ಪಾಂಡವರ ಪತ್ನಿ ದ್ರೌಪದಿಯು ನನ್ನಂತೆ ಅಪಮಾನಕ್ಕೆ ಒಳಗಾಗುವ ನಾರಿಯರು ಇನ್ನು
ಹುಟ್ಟದಿರಲಿ. ಭೀಮಸೇನನಂಥ ಬಲಶಾಲಿ ಗಂಡಂದಿರಿದ್ದೂ ನನ್ನಂಥಹ ದುಃಖಿಗಳು ಯಾರಿದ್ದಾರೆ. ಎಂದು
ಹಲುಬುತ್ತಾ ತನಗಾದ ಅವಮಾನದ ಪ್ರಸಂಗಗಳನ್ನು ನೆನೆಯುತ್ತಾಳೆ. ಅವುಗಳೆಂದರೆ
೧. ಕೌರವನು ದ್ರೌಪದಿಯನ್ನು ಸಭೆಗೆ ಎಳೆಸಿ ತಂದು ವಸ್ತ್ರಾಪರಹಣ ಮಾಡಿಸಿದ .
೨. ಅರಣ್ಯದಲ್ಲಿದ್ದಾಗ ಸೈಂದವನು(ಜಯದ್ರಥ)ದ್ರೌಪದಿಯನ್ನು ಎಳೆದಾಡಿ ತನ್ನೊಡನೆ
ಕರೆಯೊಯ್ಯಲು ಪ್ರಯತ್ನಿಸಿದ್ದ.
೩. ಇಂದು ರಾಜಸಭೆಯಲ್ಲಿ ಕೀಚಕ ಎಂಬ ನಾಯಿ ದ್ರೌಪದಿ ಅವನಿಗೆ ಸಿಗಲಿಲ್ಲವೆಂಬ ಕೋಪದಲ್ಲಿ
ಒದ್ದು ನೋಯಿಸಿದ್ದ.
ಈ ರೀತಿ ಮೂರುಬಾರಿಯೂ ಅವಮಾನದಿಂದ ನೊಂದಿದ್ದೇನೆ. ನನಗಿನ್ನು ಜೀವನ ಸಾಕಾಗಿದೆ ಎಂದು
ದುಃಖಿಸಿದಳು.
32. ಹೆಣ್ಣುಮಕ್ಕಳ ದುಃಖವನ್ನು ಬಲ್ಲವರು ಯಾರು? ಹೇಗೆ?
ಹೆಣ್ಣುಮಕ್ಕಳ
ದುಃಖ ಅರ್ಥವಾಗುವುದು ಹೆತ್ತ ತಾಯಿಗೆ ಮಾತ್ರ. ತನ್ನ ಮಗಳ ಕಷ್ಟ , ನೋವು , ನಲಿವುಗಳನ್ನು ಸ್ವ ಅನುಭವದಿಂದ ಅರಿಯಬಲ್ಲರು. ತಂದೆಯಾಗಲಿ,
ಗಂಡನಾಗಲಿ, ಹೆಣ್ಣಿನ ಕಷ್ಟಗಳನ್ನು ಅರಿಯುವ ಸೂಕ್ಷ್ಮಬುದ್ಧಿ ಹೊಂದಿರುವುದಿಲ್ಲ. ತಾಯಿಮಾತ್ರ ಆ
ಶಕ್ತಿಯನ್ನು ಹೊಂದಿರುವಳು ಹುತ್ತದೊಳಗಿರುವ ಸರ್ಪದ ನೋವನ್ನು ದೇವರು ಮಾತ್ರ ಅರಿಯಬಲ್ಲನೋ ಅಂತೆಯೇ
ತಾಯಿ ತನ್ನ ಮಕ್ಕಳ ದುಃಖವನ್ನು ಅರಿಯಬಲ್ಲಳು.
33. ಬೆಳಗು ಜಾವ ಕವನದ ಮೂಲಕ ಕವಿ ಬೇಂದ್ರೆ ಹೇಳಿರುವ ವಿಚಾರಗಳು ಯಾವುವು?
ಕವಿ ಬೇಂದ್ರೆಯವರು ತಮ್ಮ ಬೆಳಗು ಜಾವ ಎಂಬ ಕವಿತೆಯ ಮೂಲಕ ಮಾನವನ ಜೀವನದ ಸಾರ್ಥಕತೆಯು ಅಡಗಿರುವುದು ಯೌವನದಲ್ಲಿ.
. ಯೌವನವನ್ನು ಮುಂಜಾವಿನ ಸೂರ್ಯೊದಯದ ಸಮಯಕ್ಕೆ ಹೋಲಿಸಿ ಬದುಕನ್ನು
ಸಾರ್ಥಕತೆಗೊಳಿಸಿಕೊಳ್ಳಬೇಕಾದಲ್ಲಿ ಎಚ್ಚರಾಗಿರಿ ಎಂದು ಕರೆನೀಡಿದ್ದಾರೆ. ಬೆಳಗು ಬದುಕಿಗೆ ಅದಮ್ಯಚೈತನ್ಯವನ್ನು ತುಂಬುವಂತಹ ಸಮಯ.
ಇದು ಪ್ರಕೃತಿಯು ನಮಗೆ ನೀಡಿದ ವರ. ಬಾಳಿನ ಅಶಾಶ್ವತೆಯನ್ನು ತಿಳಿಸುತ್ತಾ ಯೌವನದ ರಸವನ್ನು
ಕುಡಿಯಬೇಕು ಎಚ್ಚರಗೊಳ್ಳಿ ಯಾವಾಗಲೋ ಕೋಳಿಕೂಗಿದೆ ಎಂದು ಹೇಳುತ್ತಾ ಜೀವನ ಎಂಬ ನದಿಗೆ ಸೆಳವು ಇದೆ.
ಯಾವಗ ಬೇಕಾದರೂ ಮರಣ ಸಂಭವಿಸಬಹುದು. ಸತ್ತಮೇಲೆ ಮತ್ತೆ ಬರಲಾಗದು. ಯೌವನವೆಂಬುದು ಮರಗಳಿಗೆ
ಮತ್ತೆಮತ್ತೆ ದೊರಕ್ಕುತ್ತದೆಯಾದರು ನಮಗೆ ಯೌವನ ಲಭ್ಯವಾಗುವುದು ಒಮ್ಮೆಮಾತ್ರ ಹಾಗಾಗಿ
ಎಚ್ಚರಗೊಳ್ಳಿ ಎಂದು ತಿಳಿಸಿದ್ದಾರೆ.
34.ಯಾವ ಸ್ಥಳಗಳಲ್ಲಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ? ಚರ್ಚಿಸಿ.
ಮಾನವತೆ, ಪ್ರೀತಿ,
ವಿಶ್ವಾಸ, ಸಹಿಷ್ಣುತೆ ಇವುಗಳ ಸಂಕೇತವಾದ ಜೀಸಸ್ ಈ ಗುಣಗಳು ಎಲ್ಲೆಲ್ಲಿ ನಾಶಹೊಂದುತ್ತಿವೆಯೋ
ಅಲ್ಲೆಲ್ಲಾ ಶಿಲುಬೆಗೇರುತ್ತಿದ್ದಾನೆ. ಎಂದು ಕವಿ ಮಾರ್ಮಿಕವಾಗಿ ನುಡಿದಿದ್ದಾರೆ. ಚರ್ಚು, ಮಸೀದಿ
, ಮಂದಿರಗಳಲ್ಲಿ , ಕೋರ್ಟು, ಕಾರ್ಖಾನೆ, ಪೊಲಿಸ್ ಠಾಣೆಗಳಲ್ಲಿ, ಕಣ್ಬೆಳಕ ಕಿತ್ತೆಸೆದ ಬಂಧೀಖಾನೆಗಳಲ್ಲಿ , ಆಸ್ಪತ್ರೆಯ ಕೋಣೆಕೋಣೆಗಳಲ್ಲಿ
, ತಿಂಗಳಿಗೊಮ್ಮೆಯೂ ದೀಪಹಚ್ಚದ ದಲಿತರ ಸೋಗೆಯ ಮನೆಗಳಲ್ಲಿ ಹೀಗೆ ಪ್ರತಿನಿತ್ಯ ಎಲ್ಲೆಡೆ
ಶಿಲುಬೆಗೇರುತ್ತಿದ್ದಾನೆ.
2. ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
35.ಬಸಲಿಂಗನಿಗೆ ಸಿಟ್ಟುಬರಲು ಕಾರಣವೇನು? ಆತ ಅದನ್ನು ಯಾವರೀತಿಯಲ್ಲಿ
ವ್ಯಕ್ತಪಡಿಸುತ್ತಾನೆ?
ಬಸಲಿಂಗ ತನ್ನ ಎಡಗಣ್ಣು ಮತ್ತೆ ನೋಯಲು
ತಿಮ್ಮಪ್ಪನವರನ್ನು ಬಿಟ್ಟು ಬೇರೆಲ್ಲಾ ಡಾಕ್ಟರ್ ಬಳಿ ಹೋದ ಅವರು ನೀಡಿದ ಔಷಧಿ, ಸಲಹೆಗಳು
ಸರಿಹೋಗಲೇ ಇಲ್ಲಾ ಮತ್ತೆ ಡಾ||ತಿಮ್ಮಪ್ಪನವರ ಬಳಿ ಹೋದ ಅವರು ಪ್ರೀತಿಯಿಂದಲೇ ಮಾತನಾಡಿಸಿ ಅವನ
ಬಾಯಿಬಿಡಿಸಿದರು. ತನ್ನ ಸುಳ್ಳು ಡಾಕ್ಟರರಿಗೆ ತಿಳಿದಿದೆ ಎಂದು ಗಾಬರಿಯಾದ. ತಿಮ್ಮಪ್ಪನವರನ್ನು ಮತ್ತೊಮ್ಮೆ ಆಪರೇಷನ್ ಮಾಡುವಂತೆ
ಬೇಡಿಕೊಂಡ ತಿಮ್ಮಪ್ಪನವರು ತಲೆಯಾಡಿಸುತ್ತಾ ಇನ್ನೊಂದು ಆಪರೇಷನ್ ನಿಂದ ಏನೂ ಆಗುವುದಿಲ್ಲ. ಎಂದು
ಹೇಳುತ್ತಾ ಈಗ ಇರೋ ಗಾಯಕ್ಕೆ ಔಷಧಿ ಕೊಡ್ತೇನೆ ತಪ್ಪದೆ ಹಚ್ಚಿಕೊಂದು ಹೇಳಿದರು ಇದರಿಂದ ತನ್ನ
ಜಾತಿ ಕೆಡಿಸಿದ್ದು ಅಲ್ಲದೆ ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಬಸಲಿಂಗನಿಗೆ ಸಿಟ್ಟುಬಂತು. ತನ್ನ ಕಣ್ಣುಹೋಗಲು
ತಿಮ್ಮಪ್ಪನವರೇ ಕಾರಣವೆಂದು ತನಗೆ ಗೊತ್ತಿರುವವರೆಲ್ಲರ ಬಳಿ ಹೇಳಿಕೊಂಡು ತಿಮ್ಮಪ್ಪನವರನ್ನು
ಟೀಕಿಸತೊಡಗಿದ.ತಾನು ತಿರುಚಿ ಹೇಳುತ್ತಿರುವುದೇ
ಸತ್ಯವೆಂಬುದಾಗಿ ನಂಬಿಬಿಟ್ಟ.
36.ಸೀತಾ ಎಂಬ ಗೆಳತಿಯ ಗುಣ ಸ್ವಭಾವವನ್ನು
ಲೇಖಕಿ ಹೇಗೆ ಚಿತ್ರಿಸಿದ್ದಾರೆ?
ಲೇಖಕಿಯು ಮೈಸೂರಿನಲ್ಲಿ ಹೈಸ್ಕೂಲು
ಓದುತ್ತಿರುವಾಗ ಪರಿಚಯವಾದವಳು ಸೀತೆ. ಸೀತೆಯತಂದೆ ಲೇಖಕಿಯವರ ತಂದೆ ಇಬ್ಬರೂ
ಪ್ರಾಧ್ಯಾಪಕರಾಗಿದ್ದವರು ಎಷ್ಟುಬೇಕಾದರೂ ಓದಿಸಲು ಸಿದ್ಧರಿದ್ದವರು. ಸೀತೆ ಮಾತ್ರ ಓದಿನಲ್ಲಿ
ಆಸಕ್ತಿ ತಳೆಯದೆ ಎಸ್.ಎಸ್.ಎಲ್.ಸಿ ಯಲ್ಲಿ ಎಲ್ಲ ವಿಷಯಗಳಲ್ಲಿ ಫೇಲ್ ಆಗಿ ಮತ್ತೊಮ್ಮೆ
ಪರೀಕ್ಷೆಕಟ್ಟುವ ತಾಪತ್ರಯಕ್ಕೆ ಹೋಗಲಿಲ್ಲ. ಮಾರ್ಕೇಟು, ಸಿನೇಮಾ ಎಂದು ಗೆಳತಿಯರ ಜೊತೆ
ಸುತ್ತುತ್ತಿದ್ದಳು. ಹುಡುಗಿ ಡಿಗ್ರಿಯಾದರೂ
ಮಾಡಿರಬೇಕು ಎಂದು ಬಯಸುವ ಕಾಲದಲ್ಲಿ ಡಿಗ್ರಿಆಗಿಲ್ಲದ್ದರಿಂದ ಕೈ ತುಂಬಾ ಸಂಬಳ ತರುವ ಹುಡುಗ
ಸಿದಗಾದಾಯ್ತು. ಗಂಡನ ಮನೆಗೆ ಹೊಂದಿಕೊಳ್ಳಲಾಗದೆ, ದಿನನಿತ್ಯ ನರಕ ಅನುಭವಿಸುತ್ತಿದ್ದಳು.
ಎಸ್.ಎಸ್. ಎಲ್.ಸಿ ಕಟ್ಟು , ಟೈಪಿಂಗ್ ಕಲಿ, ಏನಾದರೂ ಮಾಡು ಎಂದರೆ ಅವೆಲ್ಲ ಪ್ರಾಯಾಸಕರವಾಗಿ
ಕಂಡು ಬಂದವು ಏಕೆಂದರೆ ಸೀತೆಗೆ ಎಲ್ಲವೂ ತಟ್ಟನೆ ಆಗಿಬಿಡಬೇಕು. ಕೈತುಂಬಾ ಸಂಪಾದಿಸಿ ತಂದು ಹಾಕಿ
ಹೆಂಡ್ತೀನಾ ಚೆನ್ನಾಗಿ ಇಟ್ಟುಕೊಳ್ಳುವುದು ಗಂಡನ ಜವಾಬ್ದಾರಿ ಎಂದೇ ಬಲವಾಗಿ ನಂಬಿದ್ದಳು.
ಲೇಖಕಿಯಬಳಿ ನೀನೇ ಅದೃಷ್ಟವಂತೆ ಎಂದು ಹೇಳುತ್ತಾ ತನ್ನ ದುರಾದೃಷ್ಟವನ್ನು ಹಳಿಯುತ್ತಾ ತನ್ನ
ಬದುಕನ್ನು ದುರಂತಮಯ ಮಾಡಿಕೊಂಡಳು ಎಂದು ತನ್ನ ಗೆಳತಿಯ ಬಗ್ಗೆ ಹೇಳಿದ್ದಾರೆ.
37. ಮುದ್ದಣ- ಮನೋರಮೆಯರ ಸಂವಾದದ ಸ್ವಾರಸ್ಯವನ್ನು ವಿವರಿಸಿ.
ಕನ್ನಡ ಸಾಹಿತ್ಯ ಸೌರಭದಲ್ಲಿಯೇ
ಮುದ್ದಣ-ಮನೋರಮೆಯರ ಸಂವಾದ ಬಹಳ ಸ್ವಾರಸ್ಯಕರವಾದ ಘಟ್ಟವಾಗಿದೆ.
ಅರಮನೆಯಿಂದ ಬಂದ ಪತಿಯನ್ನು
ಉಪಚರಿಸುತ್ತಾ ಬಗೆಯು ಬೇಸರ್ತುದು ಏನಾನುಂ ಒಂದು ನಲ್ಗತೆಯಂ ಪೇಳಾ ಎಂದರೆ ಪ್ರಾಣೇಶ್ವರೀ ತಡೆಯೇಂ
ಇನಿತೊಂದು ಬಯಕೆ ತಲೆದೋರೆ ಆವಗಹನಂ ಎಂದು ಹೇಳುವಾಗ, ಸೀತಾಪಹರಣದ ಕಥೆಯಕೇಳುವ ಬಯಕೆಯೇ ಎಂದಾಗ ಉಃ
ಆನೊಲ್ಲೆಂ ಎನ್ನುತ್ತಾಳೆ ಮೇಣ್ ಆವ ನಲ್ಗತೆಯಂ ಪೇಳೆನೋ ಎಂದು ಗೊಂದಲ ತೋರಿದರೆ ಇಂತೇಕೆ ಉಸಿರ್ವಯ್
ನಾಡೊಳ್ ಎನಿತ್ತೋ ರಾಮಾಯಣಂಗಳ್ ಒಳವು ನೀ ಕೇಳ್ದುದರೊಳೇ ನಲ್ಮೆದೋರೆ ಕಂಡು ಪೇಳ್ವುದು ಎಂದು ತನ್ನ
ಗಂಡ ಜ್ಞಾನಿ ಎಷ್ಟೆಲ್ಲಾ ತಿಳಿದುಕೊಂಡಿದ್ದಾನೆ ಎಂಬಭಾವ ವ್ಯಕ್ತಪಡಿಸುತ್ತಾಳೆ,.
ಅಂತೆಯೇ ಉಡುಗೊರೆಯ ವಿಚಾರಬಂದಾಗ
ಅರಮನೆಯಲ್ಲಿ ಈರೀತಿಯ ಕಥೆ ಹೇಳಿದರೆ ರತ್ನದ ಕಡಗವನ್ನೋ ಚಿನ್ನದ ಕಂಠೀಹಾರವನ್ನೋ ಕೊಡುತ್ತಾರೆ
ನೀನು ಏನು ಕೊಡುವೆ ಎಂದು ಛೇಡಿಸಿದರೆ ಅದಕ್ಕೆ ತಕ್ಕ ಉತ್ತರವಾಗಿ ಎನ್ನನೇ ಆನೀವೆಂ ಎಂದು
ಹೇಳುತ್ತಾಳೆ ಅವನು ಬಿಡದೆ ಮೊದಲೇ ನಿನ್ನತಂದೆ –ತಾಯಿಗಳು
ನಿನ್ನನ್ನು ನನಗೆ ಅರ್ಪಿಸಿದ್ದಾರೆ , ಬೇರೆ ಏನು ಕೊಡುವೆ ಎಂದು ಕಿಟಲೆ ಮಾಡುತ್ತಾನೆ. ಅವಳೋ ಮಹಾ
ಜಾಣೆ ಅರಮನೆಯವರು ಕಥೆ ಕೇಳಿದನಂತರ ಉಡುಗೊರೆ ನೀಡುವರಲ್ಲವೇ ನಾನೂ ಕಥೆಕೇಳಿ ಅದರ ಶಕ್ತಿಎಷ್ಟಿದೆ
ನೋಡಿ ಅದಕ್ಕೆ ತಕ್ಕಂತೆ ಸನ್ಮಾನಿಸುತ್ತೇನೆ ಎಂಬ ಜಾಣ ಉತ್ತರ ನೀಡುತ್ತಾಳೆ .
ಸಂಸ್ಕೃತದಲ್ಲಿ ಕಥೆಯನ್ನು
ಆರಂಭಿಸಿದೊಡೆ ಈರೀತಿ ಆರಂಭವಾಗುವ ಕಥೆಗೆ ಎಂತು
ಉಡುಗೊರೆ ಯೀವೆನೋ ಎಂದು ರೇಗಿಸುತ್ತಾಳೆ. ಅಲ್ಲದೆ ನೀರಿಳಿಯದ ಗಂಟಲಲಿ ಕಡುಬನ್ನು ತುರುಕಿದಂತೆ
ಆಯಿತು ಸರಳವಾಗಿ ತಿಳಿಕನ್ನಡದಲ್ಲಿ ಕಥೆ ಹೇಳು
ಎಂದು ಕನ್ನಡ ಪ್ರೇಮವ್ಯಕ್ತಪಡಿಸುತ್ತಾಳೆ. ಇವರಿಬ್ಬರ ಸಂವಾದದಲ್ಲಿ ಪತಿಪತ್ನಿಯರನಡುವಿನ ಸಲ್ಲಾಪ,
ಒಬ್ಬರನೂಬ್ಬರು ರೇಗಿಸುವ, ಕೆಣಕುವ, ಮೆಚ್ಚುವ ಭಾವಗಳು ಕಣ್ಣೆದುರು ತೇಲಿಹೋಗುತ್ತದೆ,
3. ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
38.ಆನೆ ಮತ್ತು ಮಾವುತ ವೇಲಾಯುಧನನ್ನು ಸಾಗಹಾಕಲು ಮಠದವರು ಹವಣಿಸಿದ್ದೇಕೆ?
ಕೃಷ್ಣೇಗೌಡರ ಆನೆ ಕಾಡಿನಿಂದ ಹಿಡಿದು ತಂದು ಪಳಗಿಸಿದ ಆನೆಯಲ್ಲ. ಘಟ್ಟದ ಕೆಳಗೆ
ಗೂಳೂರು ಮಠದ ಆನೆ ಹಾಕಿದ ಮರಿ ಇದು.
ಹುಟ್ಟಿಬೆಳೆದಿದ್ದೆಲ್ಲಾ ಊರಿನ ಜನರ ನಡುವೆಯೇ, ಕಾಡಿನ ಬಗ್ಗೆಯಾಗಲಿ, ಕಾಡಾನೆಗಳ
ಬಗ್ಗೆಯಾಗಲಿ ಇದಕ್ಕೆ ಯಾವುದೇ ತಿಳುವಳಿಕೆ ಇರಲಿಲ್ಲ. ಮಠದ ಜಗದ್ಗುರುಗಳು ಜನರು ಹೊರುವ
ಅಡ್ಡಪಲ್ಲಕ್ಕಿಯಲ್ಲೇ ತಿರುಗುತ್ತಿದ್ದರಿಂದ ಆನೆಗೆ ಗುರುಗಳನ್ನು ಹೊರುವ ಜವಾಬ್ದಾರಿ
ತಪ್ಪಿಹೋಗಿತ್ತು. ಕೆಲಸವಿಲ್ಲದೆ ನಿರುಪಯುಕ್ತವಾಗಿತ್ತು. ಅಲ್ಲದೆ ಈ ಆನೆಗಿಂತ ಇದರ ಮಾವುತನನ್ನು
ಹೊರಹಾಕಿ ಕೈ ತೊಳೆದುಕೊಳ್ಳಲು ಮಠದವರುಹವಣಿಸುತ್ತಿದ್ದರು. ಆನೆಗಿಂತ ವೇಲಾಯುಧನನ್ನು ಸಾಕುವುದು
ಮಠದವರಿಗೆ ತ್ರಾಸವಾಗಿತ್ತು. ದಿನದ ೨೪ಗಂಟೆಯೂ ಕುಡಿದು ಮಠದ ಸಾತ್ವಿಕವಾತಾವರಣವನ್ನು
ಹಾಳುಗೆಡವಿದ್ದ ಅವನ ದುರ್ನಡತೆಯನ್ನು ಮಠದವರು ಸಹಿಸದೇ ಇವನನ್ನು ಸಾಗಹಾಕಲು ಯೋಚಿಸಿದ್ದರು
ಅದೇವೇಳೆಗೆ ವಿಮ್ಕೋ ಕಂಪನಿ ಬೆಂಕಿಕಡ್ಡಿಮರಗಳನ್ನು ಕಡಿಯಲು ಗುತ್ತಿಗೆ ಪಡೇದಿತ್ತು ಇದನ್ನು
ತಿಳಿದ ಕೃಷ್ಣೇಗೌಡ ಆನೆಯನ್ನು ಕೊಂಡು ತಂದನು.
39.ನಿದ್ರೆಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ.
ಶಿವೇಗೌಡರ ಸಾಮಿಲ್ಲಿನಲ್ಲಿ ಕಳ್ಳನಾಟ ತುಂಬಿಕೊಂಡು ಬಂದಿದ್ದ ಲಾರಿಯಲ್ಲಿ ಡ್ರೈವರ್
ಸ್ಟೇರಿಂಗ್ ಹಿಡಿದು ತೂಕಡಿಸುತ್ತಾ ಕುಳಿತಿದ್ದ. ಕ್ಲೀನರ್ ನಾಯರ್ ಚಹಾ ಕುಡಿಯಲೆಂದು ಹೋಗಿದ್ದ.
ಇಂತಹ ಸಂದರ್ಭದಲ್ಲಿ ತಾನೂ ಷರಾಬನ್ನು ಸೇವಿಸಿ, ಅನೆಗೂ ಕುಡಿಸಿ ತೂರಾಡುತ್ತಾ ಅನೆಯೊಂದಿಗೆ ಬಂದ
ವೇಲಾಯುಧ ಲಾರಿಗೂ ನಾಟಾಗಳಿಗೂ ಹಗ್ಗ ಬಿಗಿದು ಕಟ್ಟಿದ್ದು ಬಿಚ್ಚುವುದನ್ನು
ಮರೆತು ಹಿಂದು ಮುಂದು ನೋಡದೆ ಆನೆಗೆ ಲಾರಿಯಲ್ಲಿರುವ ನಾಟಾಗಳನ್ನು ತಳ್ಳುವಂತೆ ಹೇಳಿದ . ಆನೆ
ಜೋರಾಗಿಯೆ ತಳ್ಳತೊಡಗಿತು. ಲಾರಿ ನಿದಾನವಾಗಿ ಪಕ್ಕಕ್ಕೆ ಹೊರಳತೊಡಗಿತು. ನಿದ್ರೆಯ ಜೋಂಪಿನಲ್ಲಿ
ಇದ್ದ ಡ್ರೈವರ್ ಗೆ ಎಚ್ಚರವಾದಾಗ ಪ್ರಪಂಚ ತಲೆಕೆಳಗಾಗುತ್ತಿರುವ ಅನುಭವ, ಲಾರಿಯು ನಾಟದ ಸಮೇತ
ಪಕ್ಕಕ್ಕೆ ಉರುಳಿ ಬಿತ್ತು. ಕ್ಯಾಬಿನ್ ನಲ್ಲಿ
ಇದ್ದ ಮಣಭಾರದ ಜಾಕ್ ದೊಪ್ಪನೆ ಡ್ರೈವರ್ ನ ತಲೆಮೇಲೆ ಬಿದ್ದು ತಲೆಜಜ್ಜಿಹೋಗಿ ಡ್ರೈವರ್ ಪರಂಧಾಮ
ಸೇರಿದ.
40.
ಉ – ವಿಭಾಗ
1. ಒಂದು ಪದ್ಯಭಾಗದ ಭಾವಾರ್ಥ ಬರೆಯಿರಿ. 5X1=5
41. ಕದಡಿದ ಸಲಿಲಂ ತಿಳಿವಂ
ದದೆ ತನ್ನಿಂ ತಾನೆ ತಿಳಿದ ದಶವದನಂಗಾ
ದುದು ವೈರಾಗ್ಯಂ ಸೀತೆಯೋ
ಳುದಾತ್ತನೊಳ್ ಪುಟ್ಟದಲ್ತೆ ನೀಲಿರಾಗಂ
ಮೇಲಿನ ಕಾವ್ಯಭಾಗವನ್ನು ನಾಗಚಂದ್ರಕವಿಯು ರಚಿಸಿದ ರಾಮಚಂದ್ರಚರಿತಪುರಾಣ ಎಂಬ
ಕಾವ್ಯದಿಂದ ಆರಿಸಿದ ಕದಡಿದ ಸಲಿಲಂ ಎಂಬ ಕಾವ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ರಾವಣನು ತನಗೆ ಒಲಿದು ಬಂದ ಬಹುರೂಪಿಣಿವಿದ್ಯೆಯ ಬಗ್ಗೆ ಹೇಳುತ್ತ ಸೀತೆಯನ್ನು ತನಗೆ ಒಲಿಯುವಂತೆ ಹೆದರಿಸುತ್ತಿರುವಾಗ, ಸೀತೆ
ರಾಮಲಕ್ಷ್ಮಣರ ಪ್ರಾಣದ ತಂಟೆಗೆ ಹೋಗದಿರು ಎಂದು ಹೇಳುತ್ತಲೇ ಮೂರ್ಚಿತಳಾಗುತ್ತಾಳೆ. ಆ ಕ್ಷಣ
ಕದಡಿದ ನೀರು ತಿಳಿಯಾಗುವಂತೆ ರಾವಣನ ಮನಸ್ಸು ತನ್ನಿಂತಾನೇ ತಿಳಿಯಾಯಿತು. ಸೀತೆಯ ಮೇಲಿನ ವ್ಯಾಮೋಹ ತೊಲಗಿ ವೈರಾಗ್ಯ ಉದಿಸಿತು.
ಇದನ್ನೇ ಕವಿ ಉದಾತ್ತರಾದವರಲ್ಲೇ ಈರೀತಿಯ ಹೃದಯ ವೈಶಾಲ್ಯತೆ , ಮನಸ್ಸಿನಲ್ಲಿ ವೈರಾಗ್ಯ
ಮೂಡುವುದು. ಎಂದಿದ್ದಾನೆ. ಸೀತೆಯಮೇಲಿನ ಮೋಹ
ತೊಲಗಿ ಕಾರುಣ್ಯಭಾವ ಉದಿಸಿ ರಾವಣನಲ್ಲಿ ಬದಲಾವಣೆಯಾಗುವುದನ್ನ ಕವಿ ಇಲ್ಲಿ ಚಿತ್ರಿಸಿದ್ದಾನೆ.
42. ಉಣದಿರ್ಪ ಧನಮಿರ್ದೊಡೇನು
ಸುತನಿರ್ದೇಂ ಮುಪ್ಪಿನಲಾಗದಾ
ಒಣಗಲ್ಪೈರಿಗೆ ಬಾರದಿರ್ದ ಮಳೆ ತಾಂ ಬಂದೇನಾಪತ್ತಿನೊಳ್ |
ಮಣಿದು ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದಾ
ತೃಣವೇ ಪರ್ವತವಲ್ಲವೇ ಹರಹರಾ ಶ್ರೀಚನ್ನ ಸೋಮೇಶ್ವರಾ ||
ಪುಲಿಗೆರೆ ಸೋಮನಾಥನ ಸೋಮೇಶ್ವರ ಶತಕದಿಂದ ಆಯ್ದ ಭಾಗವಾದ ಪಗೆಯಂಬಾಲಕನೆಂಬರೆ ಎಂಬ
ಕಾವ್ಯಭಾಗದಿಂದ ಈ ಪದ್ಯಭಾಗವನ್ನು ಅರಿಸಿಕೊಳ್ಳಲಾಗಿದೆ.
ಪುಲಿಗೆರೆಸೋಮನಾಥನು ಸಮಾಜಕ್ಕೆ ಹಿತನುಡಿಗಳನ್ನು ಹೇಳುವ ಭಾಗವಾಗಿದೆ. ಲೆಕ್ಕವಿಲ್ಲದಷ್ಟು ಧನವಿದ್ದರೇನು? ಹಸಿದ ಹೊಟ್ಟೆಗೆ
ಆಹಾರ ದೊರಕಿಸುವಷ್ಟು ಇದ್ದರೆ ಸಾಕು. ತಾನೂ ಊಟಮಾಡದೆ , ಇತರರಿಗೂ ನೀಡದ ಹಣ ವ್ಯರ್ಥ. ಅಂತೆಯೇ
ಮುಪ್ಪಿನಲ್ಲಿರುವ ತಂದೆ ತಾಯಿಗಳನ್ನು ನೋಡಿಕೊಳ್ಳದ ಮಗ ವ್ಯರ್ಥ. ಕಾಯಿಲೆ ಯಿಂದ ನರಳುತ್ತಿರುವಾಗ
ಬಂದು ನೋಡದ ಬಂಧುವರ್ಗ ವ್ಯರ್ಥ, ಸಮಯಕ್ಕೆ ದೊರೆತ ಹುಲ್ಲುಕಡ್ಡಿಯಷ್ಟು ಸಹಾಯವೂ ಪರ್ವತದಷ್ಟು
ಮಹತ್ವದ್ದಾಗುತ್ತದೆ.
2. ಆರು ಪ್ರಶ್ನೆಗಳಿಗೆ ಸೂಚನೆಗೆ ಅನುಗುಣವಾಗಿ ಉತ್ತರಿಸಿ. 2X6=12
43. ಪದಗಳಿಗೆ ಸಮಾನಾರ್ಥಗಳನ್ನು ಬರೆಯಿರಿ :
1. ಕಲಹ : ಜಗಳ , ಯುದ್ಧ, , 2. ತಾರೆ : ನಕ್ಷತ್ರ, ಚುಕ್ಕಿ,
44. ಈ ಪದಗಳಿಗೆ ನಾನಾರ್ಥ ಬರೆಯಿರಿ :
1.ಅಡಿ : ಕೆಳಗೆ , ಅಳತೆ 2.ಕವಿ : ಆವರಿಸು, ಕವಿತೆ ರಚಿಸುವವ
45. ಇವುಗಳ ತದ್ಭವ ರೂಪ ಬರೆಯಿರಿ :1. ಕ್ಷಮಾ : ಕ್ಷಮೆ 2. ಅಗ್ನಿ : ಅಗ್ಗಿ
46. ಈ ನುಡಿಗಟ್ಟುಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬರೆಯಿರಿ :
1. ಗಾಳಿಸುದ್ಧಿ : ಸಿನೇಮಾ ಹಾಲ್ ನಲ್ಲಿ
ಬಾಂಬ್ ಇದೆ ಎಂಬ ಗಾಳಿಸುದ್ಧಿ ದೊಡ್ಡ ಅವಘಡಕ್ಕೆ ಕಾರಣವಾಯಿತು.
2. ಕಾಲುಕೀಳು : ಸಿನೇಮಾ ಹಾಲ್ ನಲ್ಲಿ
ಪ್ರಾಂಶುಪಾಲರನ್ನು ಕಂಡ ಕೂಡಲೇ ವಿದ್ಯಾರ್ಥಿಗಳು ಅಲ್ಲಿಂದ ಕಾಲುಕಿತ್ತರು
47. ಇವುಗಳ ಕಾಲಸೂಚಕಗಳನ್ನು ಬರೆಯಿರಿ:
1.ಬರುವಳು : ಭವಿಷ್ಯತ್ ಕಾಲ 2. ಹೋದನು : ಭೂತಕಾಲ
48.ಈ ಪದಗಳಲ್ಲಿರುವ ಗುಣವಾಚಕಗಳನ್ನು ಗುರುತಿಸಿ :
1. ಕಿರುಹಾದಿ: ಕಿರು 2.ರಸಬಳ್ಳಿ : ರಸ
49. ಈ ಪದಗಳ ವಿಭಕ್ತಿಪ್ರತ್ಯಯಗಳನ್ನು ಗುರುತಿಸಿ :
1 ಧರ್ಮರಾಜನಿಗೆ > ಇಗೆ > ಚತುರ್ಥೀ ವಿಭಕ್ತಿ 2. ರಾವಣನೊಳ್> ಒಳ್ > ಸಪ್ತಮೀ ವಿಭಕ್ತಿ
3. ಪ್ರಬಂಧ ರಚನೆ : ಒಂದನ್ನು ಕುರಿತು ಪ್ರಬಂಧ ಬರೆಯಿರಿ 5X1=5
50. ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸುವ ಮಾರ್ಗಗಳು.
51.ಕ್ರೀಡೆ ಮತ್ತು ನಮ್ಮ ಆರೋಗ್ಯ
4. ಪತ್ರಲೇಖನ : ಯಾವುದಾದರೂ ಒಂದನ್ನು
ಕುರಿತು ಪತ್ರ ಬರೆಯಿರಿ. 4X1=4
52. ಬ್ಯಾಂಕಿನಲ್ಲಿ ನಿಮ್ಮ
ಉಳಿತಾಯ ಖಾತೆಯ ಅಕೌಂಟ್ ತೆರೆಯಲು ಬ್ಯಾಂಕಿನ ವ್ಯವಸ್ಥಾಪಕರಿಗೆ ಒಂದು ಪತ್ರ ಬರೆಯಿರಿ.
53. ಪರೀಕ್ಷಾ
ಸಿದ್ಧತೆಯನ್ನು ತಿಳಿಸಿ ನಿಮ್ಮ ತಂದೆಗೆ ಒಂದು ಪತ್ರ ಬರೆಯಿರಿ.
5. ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ. 4X1=4
54. ಅಜ್ಜಿ ಇಲ್ಲದ ಮನೆ , ಮಜ್ಜಿಗೆ ಇಲ್ಲದ ಊಟ
55. ಅಪಾಯ ಬಂದಾಗ ಉಪಾಯದಿಂದ ಗೆಲ್ಲಬೇಕು.
Tq sir
ReplyDeleteTq sir
ReplyDeleteSir e paper midterm ge barbahuda
ReplyDeleteTq sir
ReplyDeleteಸುಪರ್ ಸರ್
ReplyDelete